Friday, December 13, 2019

wonder voice: wonder art gallary

wonder voice: wonder art gallary

ವೈಶಿಷ್ಟ್ಯಪೂರ್ಣ ಹಂಚಿನಮನಿ ಆರ್ಟ್‌ಗ್ಯಾಲರಿ



- ಚಿತ್ರಕಲಾವಿದರಿಗೊಂದು ವೇದಿಕೆ
- ಗ್ಯಾಲರಿ ಮಾಡಿ ಕಲಾಪ್ರೀತಿ ಮೆರೆದ ಕರಿಯಪ್ಪ



ಎಚ್.ಕೆ. ನಟರಾಜ

ಹಾವೇರಿ: `ನಗರಕ್ಕೊಂದು ಆರ್ಟ್‌ಗ್ಯಾಲರಿ ಮಾಡಿಕೊಡಿ' ಎಂದು ಎರಡು ದಶಕಗಳ ಕಾಲ ಹೋರಾಡಿದರೂ ಸರ್ಕಾರ ಸ್ಪಂದಿಸದೆ ಇದ್ದಾಗ ಕಲಾವಿದರೋರ್ವರು ತನ್ನ ಮನೆಯನ್ನೇ ಆರ್ಟ್‌ಗ್ಯಾಲರಿ ಮಾಡಿ ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಿ ಗಮನಸೆಳೆದಿದ್ದಾರೆ.

ಲಕ್ಷಾಂತರ ರೂ. ವೆಚ್ಚ ಮಾಡಿ ತನ್ನ ಮನೆಯಲ್ಲಿಯೇ ಸುಂದರ, ಸುಸಜ್ಜಿತ ಆರ್ಟ್ ಗ್ಯಾಲರಿ ಮಾಡಿ ತನ್ನ ಕಲಾಪ್ರೀತಿ ಮೆರೆದ ಈ ಕಲಾವಿದನ ಹೆಸರು ಕರಿಯಪ್ಪ ಹಂಚಿನಮನಿ. ಇವರು ವೃತ್ತಿಯಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಆಗಿದ್ದರೂ ಪ್ರವೃತ್ತಿಯಲ್ಲಿ ಪ್ರತಿಭಾವಂತ ಚಿತ್ರಕಲಾವಿದ. ಇವರು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ವಿವಿಧೆಡೆ ತಮ್ಮ ಚಿತ್ರಕಲೆ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ.

ಹಾವೇರಿ ನಗರದಲ್ಲೊಂದು ಸುಸಜ್ಜಿತ ಆರ್ಟ್ ಗ್ಯಾಲರಿ ನಿರ್ಮಾಣ ಆಗಬೇಕು ಎಂದು ಜಿಲ್ಲೆಯ ಕಲಾವಿದರು, ಸಾಹಿತಿಗಳು ೨೫-೩೦ವರ್ಷಗಳಿಂದಲೂ ಹೋರಾಟ, ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಬೀದಿಯಲ್ಲಿ ಚಿತ್ರಕಲೆ ಬಿಡಿಸಿ, ಬೀದಿಯಲ್ಲಿ ಚಿತ್ರಕಲೆ ಪ್ರದರ್ಶನ ಮಾಡಿ, ರಸ್ತೆ ಮೇಲೆ ಚಿತ್ರ ಬಿಡಿಸಿ ಭಿನ್ನ ವಿಭಿನ್ನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಕಣ್ತೆರೆಸುವ ಕೆಲಸ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಸರ್ಕಾರ ಈವರೆಗೂ ಸ್ಪಂದಿಸಿಯೇ ಇಲ್ಲ.

`ಹಂಚಿನಮನಿ ಆರ್ಟ್ ಗ್ಯಾಲರಿ'..

ಕಲೆ ಪ್ರದರ್ಶನಕ್ಕೆ ಉತ್ತಮ ಗ್ಯಾಲರಿ ವ್ಯವಸ್ಥೆ ಇಲ್ಲದೇ ಚಿತ್ರಕಲಾವಿದರು ಪರದಾಡುವುದನ್ನು ಮನಗಂಡ ಕರಿಯಪ್ಪ ಹಂಚಿನಮನಿ, ನಗರದ ನಂದಿ ಲೇಔಟ್‌ನಲ್ಲಿರುವ ತಮ್ಮ ನೂತನ ಮನೆಯ ಮಹಡಿಯ ಒಂದು ಭಾಗವನ್ನು ಆರ್ಟ್ ಗ್ಯಾಲರಿಗೆ ಮೀಸಲಿಟ್ಟಿದ್ದಾರೆ. ಇದಕ್ಕೆ `ಹಂಚಿನಮನಿ ಆರ್ಟ್ ಗ್ಯಾಲರಿ' ಎಂದು ಹೆಸರಿಟ್ಟಿದ್ದಾರೆ. ಇಲ್ಲಿ ಚಿತ್ರಕಲೆ ಪ್ರದರ್ಶನಕ್ಕೆ ಬೇಕಾದ ವಿಶೇಷ ವಿದ್ಯುತ್ ವ್ಯವಸ್ಥೆ, ಕಲಾಕೃತಿಗಳ ಪ್ರದರ್ಶನಕ್ಕೆ ಬೇಕಾದ ಹ್ಯಾಂಗರ್‍ಸ್ ಸೇರಿದಂತೆ ಕಲಾ ಪ್ರದರ್ಶನಕ್ಕೆ ಬೇಕಾದ ಅಗತ್ಯ ಎಲ್ಲ ವ್ಯವಸ್ಥೆ ಮಾಡಿದ್ದಾರೆ.

ಕಲಾ ಪ್ರದರ್ಶನಕ್ಕೆ ಬಂದ ಕಲಾವಿದರ ವಾಸ್ತವ್ಯಕ್ಕಾಗಿ ಒಂದು ಪ್ರತ್ಯೇಕ ಕೊಠಡಿ ವ್ಯವಸ್ಥೆವೂ ಮಾಡಿದ್ದಾರೆ. ಸುಮಾರು ೩೦-೩೫ ಕಲಾಕೃತಿಗಳು ಪ್ರದರ್ಶನ ಮಾಡುವಷ್ಟು ವಿಶಾಲವಾದ ಗ್ಯಾಲರಿ ಇದಾಗಿದ್ದು ಕಲಾ ಗ್ಯಾಲರಿಗೆ ತಕ್ಕಂತೆ ಜನಪದ ಕಲಾ ಶೈಲಿಯಲ್ಲಿ ಗ್ಯಾಲರಿಯ ಗೋಡೆ, ಬಾಗಿಲು, ಕಿಟಕಿ, ಅಲಂಕಾರ ಸಾಮಗ್ರಿ ಅಳವಡಿಸಿ ತಮ್ಮ ಗ್ಯಾಲರಿ ವಿಶಿಷ್ಟ, ವಿಭಿನ್ನ ಹಾಗೂ ಆಕರ್ಷಣೀಯವನ್ನಾಗಿಸಿದ್ದಾರೆ.

ಮನೆಯೂ ವಿಭಿನ್ನ...

ಕರಿಯಪ್ಪ ಹಂಚಿನಮನಿಯರು ಕಟ್ಟಿಸಿದ ನೂತನ ಮನೆ ಕೂಡ ವಿಶಿಷ್ಟವಾಗಿದ್ದು ಮನೆಯೇ ಒಂದು ಸುಂದರ ಕಲಾಕೃತಿಯಂತಿದೆ. ಮನೆಯ ಕಾಂಪೌಂಡ್ ಮೇಲೆ ಜನಪದ ಕಲಾಚಿತ್ರಗಳು, ಗೇಟಿಗೆ ಎತ್ತಿನಗಾಡಿಯ ಚಕ್ರ, ನೈಸರ್ಗಿಕವಾಗಿರುವ ಮರದ ಹಲಗೆಗಳನ್ನು ಕಲಾತ್ಮಕವಾಗಿಟ್ಟು ಜೋಡಿಸಿರುವ ಬಾಗಿಲು- ಚೌಕಟ್ಟು ಹೀಗೆ ಎಲ್ಲವೂ ವಿಶಿಷ್ಟವಾಗಿದ್ದು ಒಟ್ಟಾರೆ ಮನೆ ಅಕ್ಷರಶಃ `ಕಲಾ ಮನೆ'ಯಂತಾಗಿದೆ. ಇದು ಕರಿಯಪ್ಪ ಅವರಿಗೆ ಕಲೆ ಮೇಲಿನ ಪ್ರೀತಿ, ಅಭಿಮಾನದ ಸಂಕೇತದಂತಿದೆ.

ಉದ್ಘಾಟನೆಯೂ ವಿಶೇಷ...

ಕರಿಯಪ್ಪ ಹಂಚಿನಮನಿಯವರು ಸೆ. ೨೨ರಂದು ಬೆಳಿಗ್ಗೆ ೧೦ಗಂಟೆಗೆ `ಹಂಚಿನಮನಿ ಆರ್ಟ್ ಗ್ಯಾಲರಿ'ಯ ಉದ್ಘಾಟನೆ ಇಟ್ಟುಕೊಂಡಿದ್ದು ಇದನ್ನೂ ವಿಶಿಷ್ಟವಾಗಿ ಆಯೋಜಿಸಿಕೊಂಡಿದ್ದಾರೆ. ಅಂದು ರಾಜ್ಯಾದ್ಯಂತದಿಂದ ೫೦ಕ್ಕೂ ಹೆಚ್ಚು ಕಲಾವಿದರನ್ನು ಕರೆಸಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಶಿಬಿರ ಏರ್ಪಡಿಸಿದ್ದಾರೆ. ಉದ್ಘಾಟನೆಯ ದಿನ ನೂತನ ಗ್ಯಾಲರಿಯಲ್ಲಿ ಹಂಚಿನಮನಿಯವರ ಕಲಾಕೃತಿಗಳು ರಾರಾಜಿಸಿದರೆ, ಮರುದಿನ ಉಳಿದ ಕಲಾವಿದರ ಕಲಾಕೃತಿಗಳು ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.

ಒಟ್ಟಾರೆ `ಹಂಚಿನಮನಿ ಆರ್ಟ್ ಗ್ಯಾಲರಿ' ಚಿತ್ರಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಿ, ಕಲೆಗೆ ಪ್ರೋತ್ಸಾಹದಾಯಕವಾಗಲಿದೆ ಎಂದು ಅಪೇಕ್ಷಿಸಲಾಗಿದೆ.

--- ---

ಚಿತ್ರಕಲಾವಿದವರಿಗೆ ತಮ್ಮ ಕಲೆ ಪ್ರದರ್ಶನಕ್ಕೆ ವೇದಿಕೆ ಮುಖ್ಯ. ನಗರದಲ್ಲಿ ಉತ್ತಮ ಆರ್ಟ್ ಗ್ಯಾಲರಿ ಇಲ್ಲ. ಕಲಾವಿದರು ಅವ್ಯವಸ್ಥಿತ ಸಭಾಭವನಗಳಲ್ಲಿ ಇಲ್ಲವೇ ಬಯಲಿನಲ್ಲಿ ತಮ್ಮ ಕಲೆ ಪ್ರದರ್ಶಿಸುವ ಸ್ಥಿತಿ ಇದೆ. ಕಲಾವಿದರ ಈ ಕಷ್ಟ ಕಂಡು ನನ್ನ ಮನೆಯಲ್ಲಿಯೇ ಆರ್ಟ್ ಗ್ಯಾಲರಿ ಮಾಡಿದ್ದೇನೆ. ಈ ಗ್ಯಾಲರಿ ಉಪಯೋಗಕ್ಕೆ ಯಾವುದೇ ಶುಲ್ಕ ಇಲ್ಲ. ಉಚಿತವಾಗಿ ಕಲಾವಿದರಿಗೆ ಈ ಗ್ಯಾಲರಿ ಲಭ್ಯವಾಗಲಿದ್ದು ಇದು ನನ್ನ ಅಳಿಲು ಕಲಾಸೇವೆ.

-ಕರಿಯಪ್ಪ ಹಂಚಿನಮನಿ, ಕಲಾವಿದ.



---- ---

ಹೋರಾಟಕ್ಕೆ ಸಿಕ್ಕಿಲ್ಲ ಫಲ...

ಹಾವೇರಿಯಲ್ಲೊಂದು ಆರ್ಟ್ ಗ್ಯಾಲರಿ ಆಗಬೇಕು ಎಂದು ಜಿಲ್ಲೆಯ ಕಲಾವಿದರು, ಸಾಹಿತಿಗಳು ಎಲ್ಲರೂ ಸೇರಿ ಎಂದು ಎರಡೂವರೆ ದಶಕದಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಈವರೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಕಲಾವಿದ ಕರಿಯಪ್ಪ ಅವರು ತಮ್ಮದೇ ಮನೆಯಲ್ಲಿಯೇ ಸ್ವಂತ ಖರ್ಚಿನಲ್ಲಿ ಸುಂದರ ಆರ್ಟ್‌ಗ್ಯಾಲರಿ ಮಾಡಿ ಅವರಿಗೆ ಕಲೆ ಹಾಗೂ ಕಲಾವಿದರ ಮೇಲಿರುವ ಪ್ರೀತಿ, ಅಭಿಮಾನ ವ್ಯಕ್ತಪಡಿಸಿರುವುದು ಪ್ರಶಂಸನೀಯ.






No comments:

Post a Comment