Friday, December 13, 2019

wonder temple

ಕುರಿ ಹಾಲಿನ ದೇಗುಲ!


- ಅಪರೂಪದ ದೇವಸ್ಥಾನಗಳು
- ೩೫-೪೦ ಸಾವಿರ ಲೀಟರ್ ಹಾಲಿನಿಂದ ನಿರ್ಮಾಣ


ಶ್ರಮಜೀವಿಗಳೆಂದೇ ಗುರುತಿಸಲ್ಪಡುವ ಅಲೆಮಾರಿ ಕುರಿಗಾರರು ಅಪ್ಪಟ ಶುದ್ಧ ಕುರಿ ಹಾಲು ಬಳಸಿ ನಿರ್ಮಿಸಿದ ಎರಡು ಬಲು ಅಪರೂಪದ ದೇಗುಲಗಳು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಜಿಲ್ಲೆಯ ಸವಣೂರು ತಾಲೂಕಿನ ಮಣ್ಣೂರು ಮತ್ತು ಬಂಕಾಪುರದ ಮಧ್ಯೆ ಇವೆ.
ಅಪ್ಪಟ ಕುರಿ ಹಾಲು ಬಳಸಿ ಕಟ್ಟಲ್ಪಟ್ಟ ಈ ಅಪರೂಪದ ಈ ದೇವಾಲಯಗಳಲ್ಲಿ ಒಂದು ಶ್ರೀರೇವಣಸಿದ್ದೇಶ್ವರರ ದೇವಾಲಯವಾಗಿದ್ದರೆ, ಇನ್ನೊಂದು ಪದ್ಮಗೌಡ- ಚಿಮಲಾದೇವಿ ದೇವಸ್ಥಾನವಾಗಿದೆ. ಇದು ಸವಣೂರು ತಾಲೂಕು ತೆಗ್ಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಣ್ಣೂರು ಸಮೀಪವಿದೆ.
ದೇವಸ್ಥಾನದ ತಳಪಾಯ ನಿರ್ಮಾಣಕ್ಕೆ ಏಳು ನದಿಗಳ ನೀರು ಬಳಸಲಾಗಿದೆ. ತಳಪಾಯದ ಬಳಿಕ ಇಡೀ ಕಟ್ಟಡವನ್ನು ಕುರಿ ಹಾಲಿನಲ್ಲಿಯೇ ಕಟ್ಟಲಾಗಿದೆ. ೩೫ರಿಂದ ೪೦ ಸಾವಿರ ಲೀಟರ್‌ಗೂ ಹೆಚ್ಚು ಹಾಲು ಈ ದೇವಾಲಯಗಳ ನಿರ್ಮಾಣಕ್ಕೆ ಬಳಸಲಾಗಿದೆ.
ದೇವರ ಕೃಪೆಗಾಗಿ ಒಬ್ಬೊಬ್ಬರು ಒಂದೊಂದು ರೀತಿ ದೇಗುಲಗಳನ್ನು ಕಟ್ಟುತ್ತಾರೆ. ಕೆಲವರು ಬೆಳ್ಳಿಯಿಂದ, ಬಂಗಾರದಿಂದ ಇನ್ನು ಕೆಲವರು ವಿವಿಧ ಲೋಹ, ವಿಶಿಷ್ಟ ಕಲ್ಲು- ಮಣ್ಣು ಬಳಸಿ ದೇವಸ್ಥಾನಗಳನ್ನು ಕಟ್ಟುತ್ತಾರೆ. ಇಂಥ ದೇವಾಲಯಗಳನ್ನು ದೇಶದಲ್ಲಿ ಅಲ್ಲಲ್ಲಿ ಕಾಣಲು, ಕೇಳಲು ಸಿಗುತ್ತವೆ. ಆದರೆ, ಕುರಿ ಹಾಲು ಬಳಸಿ ಕಟ್ಟಿದ ದೇವಸ್ಥಾನಗಳಿರುವ ಬಗ್ಗೆ ಕಾಣುವುದು, ಕೇಳಿದ್ದು ಬಹಳ ವಿರಳ. ಇಂಥ ಅಪರೂಪದ ದೇವಸ್ಥಾನಗಳ ಸಾಲಿಗೆ ಈ ಎರಡು ದೇಗುಲಗಳು ಸೇರುತ್ತವೆ.
ಈ ವಿಶಿಷ್ಟ ದೇವಸ್ಥಾನವನ್ನು ಯಾವುದೇ ಇಂಜಿನೀಯರ್‌ನ ಸಲಹೆ ಪಡೆಯದೆ, ಯಾವುದೇ ಕಟ್ಟಡ ಕಾರ್ಮಿಕರ ಸಹಾಯ ಪಡೆಯದೆ ಕೇವಲ ಕುರಿಗಾರರು ಸ್ವತಃ ಶ್ರಮವಹಿಸಿ ಸುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಿಸಿದ್ದಾರೆ. ದೇವಾಲಯ ನಿರ್ಮಾಣವನ್ನು ಒಂದು ವ್ರತವಾಗಿ ಸ್ವೀಕರಿಸಿದ ಕುರಿಗಾರರು, ದೇವಾಲಯ ಪೂರ್ಣಗೊಳ್ಳುವವರೆಗೂ ಮಾಂಸಾಹಾರ, ಮದ್ಯ ಸೇವನೆ ಮಾಡದೆ ದೇವಾಲಯ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಇಲ್ಲಿ ಗಮನಾರ್ಹ.
ಬೇಸಿಗೆಯಲ್ಲಿ ಕುರಿಗಳು ಹೆಚ್ಚು ಹಾಲು ಕೊಡುವುದರಿಂದ ಪ್ರತಿದಿನ ೧೫೦ರಿಂದ ೨೦೦ ಲೀ. ಹಾಲು ಬಳಸಿ ಆರು ತಿಂಗಳ ಅವಧಿಯಲ್ಲಿ ಈ ದೇಗುಲಗಳನ್ನು ಕಟ್ಟಲಾಗಿದೆ. ಕುರಿ ಹಾಲಿನಲ್ಲಿ ಕಟ್ಟಿದ ಈ ವಿಶಿಷ್ಟ ದೇಗುಲಗಳ ನಿರ್ಮಾಣ ಕಾರ್ಯದಲ್ಲಿ ಮಣ್ಣೂರು, ಬಂಕಾಪುರ ಸೇರಿದಂತೆ ಸುತ್ತಲಿನ ಗ್ರಾಮಸ್ಥರ ಸಹಕಾರವೂ ಪ್ರಮುಖವಾಗಿದೆ.
ಅಷ್ಟಕ್ಕೂ ಈ ದೇವಾಲಯಗಳು ಬಹಳ ಪುರಾತನ ಕಾಲದ ದೇವಾಲಯಗಳಲ್ಲ. ೨೦೦೮ರಲ್ಲಿ ಕಟ್ಟಿದ ನೂತನ ದೇವಸ್ಥಾನಗಳಾಗಿವೆ. ಪ್ರತಿ ವರ್ಷ ಶ್ರೀರೇವಣ ಸಿದ್ದೇಶ್ವರರ ಜಯಂತಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಭಕ್ತರಿಂದ ನೂರಾರು ಲೀಟರ್ ಕುರಿ ಹಾಲು ಸಂಗ್ರಹವಾಗುತ್ತದೆ.  ಈ ಹಾಲನ್ನೇ ಬಂದ ಭಕ್ತರಿಗೆ ಪ್ರಸಾದ ವಾಗಿ ನೀಡುವುದು ಇಲ್ಲಿಯ ವಿಶೇಷತೆಗಳಲ್ಲೊಂದಾಗಿದೆ.
ವಿವಾಹ ನಡೆದ ಪುಣ್ಯ ನೆಲ...
ದೇವಾಲಯಗಳನ್ನು ಹಾಲಿನಿಂದ ಈ ಸ್ಥಳದಲ್ಲಿ ಏಕೆ ಕಟ್ಟಿದರು ಎಂಬುದಕ್ಕೆ ಕಥೆ ಇದೆ. ಈ ಕಥೆಯ ಬಗ್ಗೆ ಬಾಳೆಹೊನ್ನೂರಿನ ರಂಭಾಪುರಿ ಮಠದ ಚರಿತ್ರೆಯಲ್ಲಿ ಉಲ್ಲೇಖವೂ ಇದೆ ಎನ್ನಲಾಗಿದೆ. ಹಾವೇರಿ ಜಿಲ್ಲೆಯ ಕುಂದೂರು ಗುಡ್ಡದ ಗುಹೆಯಲ್ಲಿದ್ದ ರಾಕ್ಷಸಿಯನ್ನು ಸಂಹರಿಸಿದ ಚಿಮಲಾದೇವಿ (ಇಂದ್ರಗಿರಿಯ ಚಕ್ರವರ್ತಿಯ ಮಗಳು)ಯನ್ನು ಪದ್ಮಗೌಡರು ಕರೆದುಕೊಂಡು ಮಣ್ಣೂರು ಮತ್ತು ಬಂಕಾಪುರ ನಡುವಿನ ಈ ಸ್ಥಳಕ್ಕೆ ಬರುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಶ್ರೀರೇವಣಸಿದ್ಧೇಶ್ವರ ಶ್ರೀಗಳು ಅಲ್ಲಿ ಅವರಿಬ್ಬರ ವಿವಾಹ ನೆರವೇರಿಸುತ್ತಾರೆ. ವಿವಾಹ ಮಹೋತ್ಸವ ನಡೆದ ಪವಿತ್ರ ಸ್ಥಳದಲ್ಲಿಯೇ ಈಗ ಶ್ರೀರೇವಣಸಿದ್ದೇಶ್ವರ ಹಾಗೂ ಪದ್ಮಗೌಡ- ಚಿಮಲಾದೇವಿಯ ಎರಡು ಪ್ರತ್ಯೇಕ ದೇವಸ್ಥಾನಗಳು ಕುರಿ ಹಾಲಿನಿಂದ ನಿರ್ಮಾಣಗೊಂಡಿವೆ.
ಹಾಲಿನಲ್ಲೇ ಏಕೆ ಕಟ್ಟಿದರು?...
ಶ್ರೀರೇವಣಸಿದ್ದೇಶ್ವರರು ಪದ್ಮಗೌಡ- ಚಿಮಲಾದೇವಿ ವಿವಾಹ ನೆರವೇರಿಸಿದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ಬಗ್ಗೆ ೨೦೦೬ರಲ್ಲಿ ಅಲೆಮಾರಿ ಕುರುಬರು, ಮಣ್ಣೂರು ಹಾಗೂ ಬಂಕಾಪೂರದ ಗ್ರಾಮಸ್ಥರು, ಹಿರಿಯರು ಸೇರಿ ಚರ್ಚಿಸುತ್ತಾರೆ. ಅದಕ್ಕಾಗಿ ಶ್ರೀಸಾಲಿ ದುರ್ಗಾದೇವಿ ಸಂಚಾರಿ ಕುರುಬರ ಹಾಗೂ ಕುರಿ ಸಾಕಾಣಿಕೆದಾರರ ಸಂಘ ಮಾಡಿಕೊಳ್ಳುತ್ತಾರೆ.  ದೇವಾಲಯ ನಿರ್ಮಾಣದ ಬಗ್ಗೆ ಕೆಂಡದಮಠದ ಸ್ವಾಮೀಜಿಯವರ ಎದುರು ವಿಷಯ ಪ್ರಸ್ತಾಪಿಸಿದಾಗ ಅವರು, ಈ ಹಿಂದೆ ಈ ಪ್ರದೇಶದಲ್ಲಿ ದೇವಾಲಯ ನಿರ್ಮಿಸಲು ಹಲವರು  ಮುಂದಾಗಿದ್ದರೂ ಅದು ಪೂರ್ಣಗೊಂಡಿಲ್ಲ. ದೇವಾಲಯ ಪೂರ್ಣಗೊಳ್ಳಬೇಕಾದರೆ ದೇಗುಲವನ್ನು ಒಂದು ರಾತ್ರಿಯಲ್ಲಿ ಕಟ್ಟಬೇಕು ಇಲ್ಲವೇ ಕುರಿ ಹಾಲಿನಲ್ಲಿ ಕಟ್ಟಬೇಕು. ಆಗ ಮಾತ್ರ ದೇವಸ್ಥಾನ ಕಟ್ಟಲು ಸಾಧ್ಯ ಎನ್ನುತ್ತಾರೆ. 
ಹಿರಿಯರೆಲ್ಲರೂ ಸೇರಿ ಆಲೋಚಿಸಿ, ಒಂದು ರಾತ್ರಿಯಲ್ಲಂತೂ ದೇವಸ್ಥಾನ ಕಟ್ಟಲು ಆಗದು. ಆದ್ದರಿಂದ ಕುರಿ ಹಾಲಿನಲ್ಲಿ ಕಟ್ಟಬಹುದು ಎಂಬ ತೀರ್ಮಾನಕ್ಕೆ ಬರುತ್ತಾರೆ. ದೇವಸ್ಥಾನ ಕಟ್ಟಲುದ್ದೇಶಿಸಿದ ಸ್ಥಳ ಮಹ್ಮದಹುಸೇನ್ ಮನಿಯಾರ ಎಂಬುವರಿಗೆ ಸೇರಿದ್ದಾಗಿತ್ತು. ದೇವಸ್ಥಾನ ಕಟ್ಟುತ್ತೇವೆ ಎಂದಾಗ ಅವರು ತುಂಬು ಮನಸ್ಸಿನಿಂದ ಕೊಟ್ಟರು. ಅದರಂತೆ ಕುರಿ ಹಾಲಿನ ಸಂಗ್ರಹಕ್ಕೆ ಸಿದ್ಧತೆಯನ್ನೂ ಮಾಡಿಕೊಂಡು ಪ್ರತಿದಿನ ೧೫೦-೨೦೦ಲೀ. ಹಾಲು ಸಂಗ್ರಹಿಸಲು ಯೋಜನೆ ರೂಪಿಸಿಕೊಂಡರು.
ಕಟ್ಟಡ ನಿರ್ಮಾಣ ಮಾಡುವವರು ಯಾವುದೇ ದುಶ್ಚಟ ಮಾಡದೆ ಶುಭ್ರವಾಗಿರಲು ಪಣತೊಟ್ಟರು. ಆರು ತಿಂಗಳಲ್ಲಿ ಎರಡು ಸುಂದರ ದೇವಾಲಯಗಳು ನಿರ್ಮಾಣಗೊಂಡವು. ಒಂದರಲ್ಲಿ ಶ್ರೀರೇವಣಸಿದ್ದೇಶ್ವರರ ಮೂರ್ತಿ ಇದ್ದರೆ ಇನ್ನೊಂದರಲ್ಲಿ ಪದ್ಮಗೌಡ- ಚಿಮಲಾದೇವಿ ಮೂರ್ತಿಗಳಿವೆ.
-----ಬಾಕ್ಸ್ ----
ಏಳು ನದಿ ನೀರು, ಹಾಲಿನಿಂದ ನಿರ್ಮಾಣ...
ಏಳು ನದಿಗಳ ನೀರು ತಂದು ತಳಪಾಯ ಮಾಡಿದ್ದು ದೇವಾಲಯಗಳನ್ನು ಕುರಿ ಹಾಲಿನಿಂದ ಕಟ್ಟಲಾಗಿದೆ. ಪ್ರತಿವರ್ಷ ಶ್ರೀರೇವಣಸಿದ್ದೇಶ್ವರರ ಜಯಂತಿ ನಿಮಿತ್ತ ಜಾತ್ರೆ ಮಾಡಲಾಗುತ್ತದೆ. ಜಾತ್ರೆಯಲ್ಲಿ ಕುರಿ ಹಾಲಿನ ಮೆರವಣಿಗೆ ನಡೆಯುತ್ತದೆ. ನೂರಾರು ಕೊಡ ಹಾಲು ಬರುತ್ತದೆ. ಅದನ್ನೇ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ರಾತ್ರಿ ಡೊಳ್ಳಿನ ಪದಗಳ ಸ್ಪರ್ಧೆ, ಆಲಗ ಹಾಯುವ ಕಾರ್ಯಕ್ರಮ (ಖಡ್ಗ ಹಾಕಿಕೊಳ್ಳುವುದು) ನಡೆಯುತ್ತದೆ.
-ವಿಠ್ಠಲ ಬನ್ನೆ, ಸಂಚಾರಿ ಕುರುಬರ ಹಾಗೂ ಕುರಿ ಸಾಕಾಣಿಕೆದಾರರ ಸಂಘ.

ಹಾವೇರಿ: ಕುರಿ ಹಾಲಿನಲ್ಲಿ ನಿರ್ಮಾಣಗೊಂಡಿರುವ ದೇಗುಲಗಳು.



No comments:

Post a Comment